ನುಡಿ ನಿದಾನ ಸರಣಿ 1
ಶ್..! ಇದು ‘ಮಾತು’ ಕತೆ
ಸಂವಹನ ಸರಿಯಾಗಿ ಆದಾಗಲಷ್ಟೇ ವ್ಯವಹಾರವೂ ಸುಗಮವಾಗಿ ಆಗುವುದು. ಸಂವಹನ ಸರಿಯಾಗಿ ಆಗುವುದು ಎಂದರೇನು? ’ಹೇಳುವ’ ವ್ಯಕ್ತಿಯ ಮಾತಿನ ಸಂಪೂರ್ಣ ಉದ್ದೇಶಿತ ಅರ್ಥ, ಭಾವ ಮತ್ತು ಧ್ವನಿ ’ಕೇಳುವ’ವನಿಗೆ ಆಗಬೇಕು.
ಉದ್ದೇಶ ಹೇಳುವವನದ್ದಾಗಿದ್ದು ಅದು ಸಂದರ್ಭಕ್ಕನುಗುಣವಾಗಿ ಇರುತ್ತದೆ. ಹೇಳುವವನ ಮಾತುಗಳನ್ನು ಕೇಳಿ ಅದನ್ನು ಅರ್ಥಮಾಡಿಕೊಳ್ಳಬೇಕೆನ್ನುವ ಅಗತ್ಯ ಮತ್ತು ವ್ಯವಧಾನಗಳು ಕೇಳುವವನಿಗೆ ಇದ್ದಾಗಲಷ್ಟೇ, ಹೇಳುವವನು ಹೇಳಿದ್ದು, ಕೇಳುವವನು ಕೇಳಿಸಿಕೊಂಡಿದ್ದು - ಎರಡೂ ಒಂದೇ ಆಗುತ್ತದೆ. ಸಂವಹನದ ಪ್ರಕ್ರಿಯೆ ಸಂಪೂರ್ಣವಾಗುತ್ತದೆ. ಹೇಳುವವನು ಹೇಳಿದ್ದನ್ನೆಲ್ಲ ಕೇಳುವವನು ಕೇಳಿಸಿಕೊಂಡಿದ್ದರೂ, ತಾನು ಕೇಳಿಸಿಕೊಂಡ ಭಾಷೆಯೇ ತಿಳಿಯದೆ ಹೋದರೆ ಅರ್ಥ ಗ್ರಹಿಸುವುದು ಹೇಗೆ?
ಈ ಹಿನ್ನೆಲೆಯಲ್ಲಿ ನೋಡಿದಾಗ ’ಮಾತು’ ಎನ್ನುವುದು ಒಂದು ಸಂಕೀರ್ಣ ಪ್ರಕ್ರಿಯೆ ಎನ್ನಬಹುದು. ಒಂದು ’ಮಾತು’ ರೂಪುಗೊಳ್ಳುವುದರ ಹಿನ್ನೆಲೆಗೆ ಒಂದು ಸಂದರ್ಭ, ಅದನ್ನು ವಿವರಿಸಬೇಕಾದ ಅಗತ್ಯ, ವಿವರಿಸಲು ಬಳಸಲಾಗುವ ಭಾಷೆ, ಹೇಳುವವನ ಭಾವತೀವ್ರತೆ ಮತ್ತು ಹೇಳಲ್ಪಡುವ ಮಾತಿನ ಉದ್ದೇಶಿತ ಧ್ವನಿ - ಇವಿಷ್ಟು ಕಾರ್ಯ ನಿರ್ವಹಿಸುತ್ತವೆ. ಮಾತುಗಾರಿಕೆಯೆನ್ನುವುದು ಇಷ್ಟು ಸಂಕೀರ್ಣವಾದ ವಿಚಾರವಾಗಿರುವುದರಿಂದಲೇ ಔದ್ಯಮಿಕ / ಮಾಧ್ಯಮ ಕ್ಷೇತ್ರದಲ್ಲಿ ಅದನ್ನೊಂದು ’ಕೌಶಲ’ ಎಂದು ಗುರುತಿಸಿದ್ದಾರೆ. ಅದಕ್ಕೊಂದು ತರಬೇತಿಯ ಅಗತ್ಯವನ್ನೂ ಕಂಡುಕೊಂಡಿದ್ದಾರೆ.
೨೦೦೦ ಇಸವಿಯ ನಂತರದ ದಿನಗಳಲ್ಲಿ ಮೂಡಿಬಂದ ತಂತ್ರಜ್ಞಾನ ಕ್ರಾಂತಿಯ ಕಾರಣ ಖಾಸಗಿ ಎಫ್.ಎಂ ರೇಡಿಯೋಗಳು/ ಟೆಲಿವಿಷನ್ ವಾಹಿನಿಗಳು ಸಾರ್ವಜನಿಕ ಜೀವನವನ್ನು ದೊಡ್ಡದಾಗಿ ಪ್ರಭಾವಿಸಿದವು. ಯುವಜನರ ಮಾಧ್ಯಮ ಎಂದು ಬಿಂಬಿತವಾಗಿ ಮೂಡಿಬಂದ ಖಾಸಗಿ ಎಫ್.ಎಂ ವಾಹಿನಿಗಳಲ್ಲಿ, ಕೇವಲ ಮನರಂಜನೆಯನ್ನಷ್ಟೇ ಗಮನದಲ್ಲಿಟ್ಟುಕೊಂಡ, ಹ್ರಸ್ವಗೊಳಿಸಲ್ಪಟ್ಟ ಆಡುನುಡಿಯ ಬಳಕೆ, ಅತ್ಯಂತ ಸಹಜ ಎಂಬಂತೆ ಬಿಂಬಿತವಾದ ಭಾಷಾ ಸ್ಖಾಲಿತ್ಯ ಮತ್ತು ಉಚ್ಚಾರಣಾ ಸ್ಖಾಲಿತ್ಯಗಳು, ವಿವಿಧ ಭಾಷೆಗಳನ್ನು ಬೆರೆಸಿ ಮೂಡಿಸುವ ಅರ್ಥ-ಭಾವಗಳು,- ಇವೆಲ್ಲ ತತ್‌ಕ್ಷಣಕ್ಕೆ ರೋಚಕವೆನ್ನಿಸಿದವು.
ಬಾನುಲಿಯ ಭಾಷೆ ಎಂದರೆ ಎಫ್.ಎಂ ವಾಹಿನಿಗಳ ಭಾಷೆ ಎಂದೇ ಜನ ಭ್ರಮಿತರಾದರು. ದಿನಕಳೆದಂತೆ ಈ ಭ್ರಮೆ ಕಳಚುತ್ತಿದೆ. ಆಡುನುಡಿಯ ಕನ್ನಡ ವಿರೂಪಗೊಂಡಿರುವುದನ್ನು ಕೇಳುಗರೇ ಪ್ರಶ್ನಿಸುತ್ತಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ ಇಂತಹ ಒಂದು ಸಂದಿಗ್ಧ ಸ್ಥಿತಿಗೆ ಕನ್ನಡ ಭಾಷೆ ಬಂದು ನಿಲ್ಲಲು ಕಾರಣ ನಿರೂಪಕರ (ಆರ್.ಜೆ / ವಿ.ಜೆ ಗಳ) ಭಾಷಾ ಸಾಮರ್ಥ್ಯದ ಪರಿಮಿತಿ ಮತ್ತು ಮಾತಿನ ಸಮಗ್ರ ಸ್ವರೂಪವನ್ನು ಅರ್ಥ ಮಾಡಿಕೊಳ್ಳದೆ ಪ್ರಯೋಗಕ್ಕೆ ತೊಡಗುವುದರಿಂದಾದ ದುಸ್ಥಿತಿ.
ಖಾಸಗಿ ರೇಡಿಯೋ ಮತ್ತು ಟಿವಿ ವಾಹಿನಿಗಳು ಪ್ರಾರಂಭವಾಗುವುದಕ್ಕೂ ಮೊದಲೇ ಇದ್ದ ಸಾರ್ವಜನಿಕ ಸೇವಾ ಪ್ರಸಾರ ಮಾಧ್ಯಮವಾದ ಆಕಾಶವಾಣಿ ಹಾಗೂ ದೂರದರ್ಶನಗಳು ಆ ಹೊತ್ತಿಗಾಗಲೇ ಎರಡೂ ಮಾಧ್ಯಮಗಳಲ್ಲಿನ ಮಾತಿನ ಸ್ವರೂಪವನ್ನು, ಔಚಿತ್ಯವನ್ನು ಮತ್ತು ಪರಿಮಾಣಗಳನ್ನು ನಿಖರವಾಗಿ ನಿರ್ದೇಶಿಸಿದ್ದವು. ಹೊಸತಾಗಿ ಮೂಡಿಬಂದ ಖಾಸಗಿವಾಹಿನಿಗಳು ನೀಡಿದ ನವೀನ ಅನುಭವದಲ್ಲಿ ಕೇಳುಗರು ತೇಲಿಹೋಗಿದ್ದಂತೂ ನಿಜ.
ಅದಕ್ಕಿಂತಲೂ ಮುಖ್ಯವಾಗಿ ಎಲೆಕ್ಟ್ರಾನಿಕ್ ಮಾಧ್ಯಮಗಳಾದ ರೇಡಿಯೋ ಮತ್ತು ಟೆಲಿವಿಷನ್‌ಗಳು ತೆರೆದಿಟ್ಟ ನಿರೂಪಕರ ಉದ್ಯೋಗಾವಕಾಶಗಳು ಜನಸಾಮಾನ್ಯರಲ್ಲಿ ಹೆಚ್ಚಿನ ಆಸಕ್ತಿಯನ್ನು ಮೂಡಿಸಿದವು. ಆದರೆ, ಆ ವೃತ್ತಿಯನ್ನು ನಿರ್ವಹಿಸುವಂಥ ಅಗತ್ಯಗಳಿಗೆ ತಕ್ಕಂತೆ ಆ ಹೊತ್ತಿಗೆ ಯಾವ ಕ್ರಮಬದ್ಧ ತರಬೇತಿಯೂ ಲಭ್ಯವಿರಲಿಲ್ಲ. ಉದ್ಯೋಗಾರ್ಥಿಗಳ ವೈಯಕ್ತಿಕ ಪ್ರತಿಭೆ ಮತ್ತು ಸಾಮರ್ಥ್ಯಗಳನ್ನು ಗಮನಿಸಿಯೇ ವಿವಿಧ ವಾಹಿನಿಗಳಲ್ಲಿ ಆಯ್ಕೆಗಳಾದವು. ಅರಳು ಹುರಿದಂತೆ ಮಾತನಾಡಬಲ್ಲವರೆಲ್ಲರೂ ನಿರೂಪಕರಾಗಬಹುದೆಂಬ ಭ್ರಮೆ ದಟ್ಟವಾಯಿತು.
ಖಾಸಗಿ ವಾಹಿನಿಗಳೆಲ್ಲವೂ ಪ್ರಸಾರವನ್ನು ಒಂದು ಲಾಭದಾಯಕ ಉದ್ಯಮದ ಸ್ವರೂಪದಲ್ಲೇ ಗ್ರಹಿಸಿದ್ದುದರಿಂದ ಪರಸ್ಪರ ಸ್ಪರ್ಧೆಗಿಳಿದು ವೈಯಕ್ತಿಕ ಛಾಪು ಮೂಡಿಸುವ ಸಲುವಾಗಿ ಭಾಷಾ ಬಳಕೆಯ ವಿಧಾನವನ್ನೇ ಒಂದು ಸಾಧನವನ್ನಾಗಿ ಮಾಡಿಕೊಳ್ಳಲು ಪ್ರಯತ್ನಿಸಿದವು. ರೇಡಿಯೋ ಹಾಗೂ ಟೆಲಿವಿಷನ್‌ಗಳಲ್ಲಿ ಅದುವರೆವಿಗೂ ಕೇಳಿಬರದಿದ್ದ ಹೊಸ ನಮೂನೆಯ ಪದಗಳು, ಧ್ವನಿಗಳು ಸೃಷ್ಟಿಯಾಗಿ ಅವು ಕನ್ನಡ ಭಾಷೆಯದ್ದೇ ಆಗಿಯೂಬಿಟ್ಟವು.
ಪ್ರಸ್ತುತ ಈ ಲೇಖನಮಾಲೆಯ ಉದ್ದೇಶ, ಖಾಸಗಿವಾಹಿನಿಗಳಲ್ಲಿನ ಭಾಷಾ ಬಳಕೆಯನ್ನು ಟೀಕಿಸುವುದಲ್ಲ. ಹಾಗೆ ಅದನ್ನು ಟೀಕಿಸಲೂ ಆಗುವುದಿಲ್ಲ. ಯಾವುದೇ ವಾಹಿನಿಯ ಅಗತ್ಯಗಳು ಮತ್ತು ಅಲ್ಲಿ ಲಭ್ಯವಿರುವ ಮಾನವ ಸಂಪನ್ಮೂಲಗಳಿಗೆ ಅನುಸಾರವಾಗಿ ಕಾರ್ಯಕ್ರಮಗಳನ್ನು ರೂಪಿಸಬೇಕಾದ ಅನಿವಾರ್ಯತೆಯಿರುವುದರಿಂದ, ಪ್ರತಿಯೊಂದು ವಾಹಿನಿಯದ್ದೂ ತನ್ನದೇ ಆದ ವಿಶಿಷ್ಟ ’ಧ್ವನಿ’ ರೂಪುಗೊಳ್ಳುತ್ತದೆ. ಆದ್ದರಿಂದಲೇ ಎಲ್ಲ ವಾಹಿನಿಗಳೂ ವಿಭಿನ್ನವಾಗಿಯೇ ಕೇಳಿಸುತ್ತವೆ.
’ಮಾತು’, ಎಲೆಕ್ಟ್ರಾನಿಕ್ ಮಾಧ್ಯಮಗಳಾದ ರೇಡಿಯೋ ಮತ್ತು ಟೆಲಿವಿಷನ್‌ಗಳಲ್ಲಿ ಕಲಾತ್ಮಕತೆಯನ್ನು ತರಬೇಕಾದರೆ ಬೇಕಾಗುವ ಜೀವದ್ರವ್ಯ. ರೇಡಿಯೋದಲ್ಲಂತೂ ಬರೀ ಮಾತು ಹಾಗೂ ಶಬ್ದ. ಟೆಲಿವಿಷನ್‌ನಲ್ಲಿ ದೃಶ್ಯಕ್ಕೆ ಪೂರಕವಾಗಿ ಮಾತ್ರ ಮಾತು ಬೇಕಾದೀತು. ಈ ದೃಷ್ಟಿಯಿಂದ, ಮಾಧ್ಯಮಗಳಲ್ಲಿ ಮಾತು ಅತ್ಯಂತ ಸೃಜನಾತ್ಮಕವಾದ ಪಾತ್ರವನ್ನು ವಹಿಸುತ್ತದೆ. ಆದ್ದರಿಂದಲೇ ಅಲ್ಲಿ ಮಾತು, ಕಲೆಯಾಗುತ್ತದೆ, ಒಂದು ಅಗತ್ಯ ಕೌಶಲವಾಗುತ್ತದೆ, ವೃತ್ತಿಪರತೆಯ ಸೂಚಕವಾಗುತ್ತದೆ.
ಅತಿಯಾಗಿ ಮಾತನಾಡುವವರನ್ನು ’ವಾಚಾಳಿ’ ಎಂದು ಗುರುತಿಸುತ್ತೇವೆ. ಮಿತವಾಗಿ ಮಾತನಾಡುವವರನ್ನು ’ಮೌನಿ’ ಎನ್ನುತ್ತೇವೆ. ಈ ಎರಡು ಧ್ರುವಗಳ ನಡುವಿನ ಒಂದು ಹದವನ್ನು ಕಂಡುಕೊಳ್ಳುವುದೇ ಪ್ರತಿಯೊಬ್ಬರೂ ಸಾಧಿಸಬೇಕಾಗಿರುವ ಕೌಶಲ. ಧ್ವನಿ ಹೊರಡಿಸಲು ಬಲ್ಲವರೆಲ್ಲರೂ ಹೇಗೆ ಸಂಗೀತಗಾರರಾಗಲು ಸಾಧ್ಯವಿಲ್ಲವೋ ಹಾಗೆ ಭಾಷೆ ತಿಳಿದವರೆಲ್ಲ ಮಾತುಗಾರರಾಗಲು ಆಗುವುದಿಲ್ಲ. ಎಲ್ಲಕ್ಕೂ ಪ್ರಯತ್ನ, ಸಾಧನೆ, ಅನುಕೂಲಗಳು ಇರಬೇಕು.
ಮಾತುಗಾರಿಕೆಯನ್ನೇ ವೃತ್ತಿಯಾಗಿ ಬಳಸಿಕೊಳ್ಳಬಯಸುವ ಉತ್ಸಾಹಿಗಳಿಗೆ ಮತ್ತು ತಮ್ಮ ವೃತ್ತಿಯಲ್ಲಿ ಆಗಿಂದಾಗ್ಗೆ ಮಾತುಗಾರಿಕೆಯ ಅಗತ್ಯವಿರುವವರಿಗೆ, ಮಾತನಾಡುವಾಗ ಪ್ರಯುಕ್ತವಾಗುವ ಶಬ್ದೋಚ್ಚಾರ, ಧ್ವನಿ, ಅದರ ಸಂಸ್ಕರಣೆ ಮೊದಲಾದ ಮೂಲಭೂತವಾದ ವೃತ್ತಿಪರ ಮಾಹಿತಿಗಳನ್ನು ನೀಡುವುದು ಪ್ರಸ್ತುತ ಮಾಲಿಕೆಯ ಉದ್ದೇಶ.
ಆಡುತ್ತ ಆಡುತ್ತ ಮಾತು ಸ್ಫುಟವಾಗುತ್ತದೆ. ಹಾಗೆ ಮಾತನಾಡುವಾಗ ಕೇವಲ ಶಬ್ದೋಚ್ಚಾರದ ಜೊತೆಗೆ ಪದ, ವಾಕ್ಯ ಮತ್ತು ಅರ್ಥಗಳೂ ಅಲ್ಲದೆ ವಾಚ್ಯಾರ್ಥವನ್ನು ಮೀರಿದ ’ಧ್ವನಿ’ಯೂ ಸ್ಫುಟವಾಗಲು ನಮ್ಮ ಶಬ್ದೋತ್ಪತ್ತಿಯ ಅಂಗಗಳಾದ ಧ್ವನಿಪೆಟ್ಟಿಗೆ, ಶ್ವಾಸಕೋಶ, ವಪೆ, ಮೂಗು, ಬಾಯಿ, ಹಲ್ಲು, ತುಟಿ, ನಾಲಗೆಗಳನ್ನು ಹೇಗೆ ಬಳಸಿಕೊಳ್ಳಬೇಕು ಎನ್ನುವುದಕ್ಕೆ ವಿಶೇಷವಾದ ಗಮನ ನೀಡಬೇಕಾಗುತ್ತದೆ. ನಿರಂತರ ಅಭ್ಯಾಸಕ್ರಮದಿಂದ ಅವುಗಳನ್ನು ನಮ್ಮ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ.
(ಕೃಪೆ : ಪ್ರಜಾವಾಣಿ )
No comments:
Post a Comment