Tuesday, September 02, 2014


ನುಡಿ ನಿದಾನ ಸರಣಿ–3

ನಿಮ್ಮ ಧ್ವನಿಬಿಂಬ ಹೇಗೆ?



ಮಾತುಗಾರಿಕೆಯೇ ತಮ್ಮ ವೃತ್ತಿಯ ಒಂದು ಅಗತ್ಯ ಕೌಶಲವಾಗಿರುವ ವ್ಯಕ್ತಿಗಳಿಗೆ ಅದಕ್ಕೆ ಪೂರಕವಾಗಿ ತಮ್ಮ ಧ್ವನಿಯೂ ಇರಬೇಕು. ಕಣ್ಣುಮುಚ್ಚಿಕೊಂಡು ಧ್ವನಿಯೊಂದನ್ನು ಕೇಳಿದಾಗ ಆ ಕುರಿತು ನಮಗೆ ಒಂದು ಕಲ್ಪನೆ ಮೂಡಬೇಕು; ಮೂಡುತ್ತದೆ.
ಇನ್ನು ಕಣ್ಣು ತೆರೆದೇ, ಮಾತನಾಡುವ ವ್ಯಕ್ತಿಯನ್ನು ನೋಡುತ್ತಿದ್ದರೆ, ಧ್ವನಿಯನ್ನು ಆಧಾರವಾಗಿಸಿಕೊಂಡು ಆ ವ್ಯಕ್ತಿಯ ಕುರಿತು ನಮ್ಮ ಅಭಿಪ್ರಾಯವನ್ನು ರೂಪಿಸಿಕೊಳ್ಳುತ್ತೇವೆ. ಹೀಗಾಗಿ, ವೇದಿಕೆಯಲ್ಲಾಗಲೀ, ಮಾಧ್ಯಮಗಳಲ್ಲಾಗಲೀ ಅಥವಾ ಇತರರೊಂದಿಗಿನ ನಮ್ಮ ದೈನಂದಿನ ವ್ಯವಹಾರಗಳಲ್ಲಾಗಲೀ ನಾವಾಡುವ ಮೊದಲ ಮಾತು ಮತ್ತು ಅದರ ಧ್ವನಿಯ ಗುಣ, ಆ ಸನ್ನಿವೇಶದ ಮೇಲೆ ನಾವು ಸಾಧಿಸಬಹುದಾದ ಹಿಡಿತದ ಕುರಿತು ಅತ್ಯಂತ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ಇದೇ ನಮ್ಮ ‘ಧ್ವನಿಬಿಂಬ’ / ‘ಧ್ವನಿಚಿತ್ರ’ ದ ಮಹತ್ವ.
ಕೇಳುಗರು ನಾವು ಬಳಸುವ ಭಾಷೆಯ ಮೂಲಕ ಗ್ರಹಿಸುವ ಮಾಹಿತಿ ಕೇವಲ ಶೇಕಡಾ 7 ರಷ್ಟು ಮಾತ್ರ ಎನ್ನುತ್ತದೆ ಒಂದು ಅಧ್ಯಯನ. ಉಳಿದ ಭಾಗದ ಅರ್ಥವನ್ನು ಅವರು ನಮ್ಮ ಧ್ವನಿಯ ಗುಣ, ಶ್ರುತಿ, ಮಾತಿನಲ್ಲಿನ ‘ಕಾಕು’ ಮತ್ತು ನಮ್ಮ ಆಂಗಿಕ ಹಾವಭಾವಗಳಿಂದ ಗ್ರಹಿಸುತ್ತಾರೆ. ನಮ್ಮ ಧ್ವನಿ ಕೀರಲಾಗಿಯೋ, ಮೂಗಿನಿಂದ ಹೊರಡುವಂತಿದ್ದೋ, ಏರಿಳಿತಗಳಿಲ್ಲದೆ ಏಕಶ್ರುತಿಯಲ್ಲಿದ್ದೋ, ಕರ್ಕಶವಾಗಿದ್ದೋ ಇಲ್ಲವೇ ಶಕ್ತಿಹೀನವಾಗಿಯೋ ಇದ್ದಲ್ಲಿ, ಕೇಳುಗರು ಬಹಳ ಬೇಗ ನಾವಾಡುತ್ತಿರುವ ಮಾತಿನ ಬಗ್ಗೆ ಆಸಕ್ತಿಯನ್ನು ಕಳೆದುಕೊಳ್ಳುತ್ತಾರೆ.
ವ್ಯಕ್ತಿಯೊಬ್ಬನ ‘ಧ್ವನಿಬಿಂಬ’ ನಿರ್ಧಾರಿತವಾಗುವುದು:
1. ಧ್ವನಿಯ ‘ಗುಣ’ ಮತ್ತು ‘ಚೈತನ್ಯ’ಗಳಿಂದ
2. ಆಡುವ ಮಾತಿನಲ್ಲಿನ ಏರಿಳಿತಗಳಿಂದ ಉಂಟಾಗುವ ‘ಕಾಕು’ವಿನಿಂದ
3. ಅವನ ಮಾತಿನ ‘ವೇಗ’ ಮತ್ತು ‘ಲಯ’ಗಳಿಂದ
4. ಉಚ್ಚಾರಣೆಯಿಂದ
5. ಧ್ವನಿ ಎಷ್ಟು ‘ಸಣ್ಣ’ (soft) ಅಥವಾ ಎಷ್ಟು ‘ದೊಡ್ಡ’ದಿದೆ (loud) ಎನ್ನುವುದರಿಂದ
6. ಧ್ವನಿಯ ಸ್ಥಾಯಿ ‘ತಾರ’ವೋ (high pitch) ಅಥವಾ ‘ಮಂದ್ರ’ವೋ (low pitch) ಎನ್ನುವುದರಿಂದ
ಈ ಧ್ವನಿಬಿಂಬವನ್ನೇ ಆಧರಿಸಿ ಕೇಳುಗರು ವ್ಯಕ್ತಿಯ ಮಾತು ಕೇಳುವುದನ್ನು ಮುಂದುವರೆಸಬೇಕೋ ಬೇಡವೋ ಎನ್ನುವುದನ್ನು ಆತ ಮಾತನಾಡಲು ಪ್ರಾರಂಭಿಸಿದ ಮೊದಲ ಕೆಲವು ಕ್ಷಣಗಳಲ್ಲೇ ನಿರ್ಧರಿಸುತ್ತಾರೆ. ವ್ಯಕ್ತಿಯ ಧ್ವನಿಯೇ ಆತ ಯಾರು, ಏನು ಹೇಳಬೇಕೆಂದಿದ್ದಾನೆ ಎನ್ನುವ ಕುರಿತು ಪ್ರಭಾವಶಾಲಿ ಸಂದೇಶವನ್ನು ಕೇಳುಗರಿಗೆ ರವಾನಿಸುತ್ತದೆ. ವ್ಯಕ್ತಿಯ ಮಾತುಗಳನ್ನು ಆಲಿಸುವಾಗ ಕೇಳುಗರ ಒಳಪ್ರ್ರಜ್ಞೆ ಅವನ ಧ್ವನಿ ಮತ್ತು ಆಂಗಿಕ ಚಲನೆಗಳಿಂದ ಸಂದೇಶಗಳನ್ನು ಗ್ರಹಿಸುತ್ತದೆ.
ನಮ್ಮ ಸಹಜ ಪ್ರವೃತ್ತಿ, ನಿಲುವು, ವರ್ತನೆಗಳು, ಮತ್ತು ಅಭಿವ್ಯಕ್ತಿಗಳು (stance, mannerisms, expressions) ನಮ್ಮ ದೈಹಿಕ ಅಸ್ತಿತ್ವದ ಅವಿಭಾಜ್ಯ ಅಂಗಗಳು ಮಾತ್ರವೇ ಆಗಿರದೆ ನಮ್ಮ ಧ್ವನಿಯ ಮೇಲೂ ಪ್ರಭಾವ ಬೀರುತ್ತವೆ ಎನ್ನುವುದು ವೈಜ್ಞಾನಿಕ ಸತ್ಯ. ನಾವು ನಮ್ಮ ಈವರೆಗಿನ ಬದುಕಿನಲ್ಲಿ ರೂಪಿಸಿಕೊಂಡಿರುವ ಧ್ವನಿಯ, ಮಾತಿನ ಮತ್ತು ದೈಹಿಕ ರೂಢಿಗಳು (ಇತರರಿಗೆ ಆಸಕ್ತಿ ಮೂಡಿಸುವಂತಿರಲಿ ಅಥವಾ ಇಲ್ಲದಿರಲಿ) ನಮ್ಮ ಸದ್ಯದ ‘ಧ್ವನಿಬಿಂಬ’ವನ್ನು ರೂಪಿಸುವ ಅಂಗಗಳು.
ನಮ್ಮ ‘ಧ್ವನಿಬಿಂಬ’ವನ್ನು ಉತ್ತಮಪಡಿಸಿಕೊಳ್ಳಲು ಸಾಧ್ಯವಿದೆಯೇ? ಎಂದು ಕೇಳುವುದಾದರೆ ಉತ್ತರ - ಹೌದು, ಸಾಧ್ಯವಿದೆ. ಇಂದಿಗೂ ಬಹಳ ಜನ ತಮ್ಮ ಧ್ವನಿಯ ಗುಣ ಹುಟ್ಟಿನೊಂದಿಗೇ ಬಂದಿರುವುದರಿಂದ ಅದನ್ನು ಉತ್ತಮಪಡಿಸಿಕೊಳ್ಳಲಾಗುವುದಿಲ್ಲ ಎಂದೇ ತಿಳಿದಿದ್ದಾರೆ. ಇನ್ನು ಹಲವರಿಗೆ ತಮ್ಮ ‘ಧ್ವನಿಬಿಂಬ’ದ ಕಲ್ಪನೆ, ಮಹತ್ವಗಳೇ ತಿಳಿದಿಲ್ಲ. ಪ್ರತಿಯೊಬ್ಬರೂ ಒಂದು ಯಶಸ್ವೀ ‘ಧ್ವನಿಬಿಂಬ’ವನ್ನು ರೂಢಿಸಿಕೊಳ್ಳುವುದರ ಮೂಲಕ ತಾವು ಬಯಸುವಂಥ ಒಂದು ಸಮರ್ಥ ಮತ್ತು ವೃತ್ತಿಪರ ವ್ಯಕ್ತಿತ್ವವನ್ನು ತೋರ್ಪಡಿಸಲು ಸಾಧ್ಯವಿದೆ ಎನ್ನುವುದನ್ನು ಮನಗಾಣಬೇಕು.
ನಮಗೆ ಉತ್ತಮ ‘ಧ್ವನಿಬಿಂಬ’ದ ಅಗತ್ಯ ಏಕಿದ್ದೀತು ಎನ್ನುವುದು ಈ ಸಂದರ್ಭದಲ್ಲಿ ಸಹಜವಾಗಿಯೇ ಮೂಡುವ ಪ್ರಶ್ನೆ. ಅದನ್ನು ಹೀಗೆ ಉತ್ತರಿಸಬಹುದು:
1. ಅಭ್ಯರ್ಥಿಯಾಗಿ  ವೃತ್ತಿಪರ ಸಂದರ್ಶನಗಳನ್ನು ಎದುರಿಸುವಾಗ
2. ಸಾರ್ವಜನಿಕ ವೇದಿಕೆಗಳಲ್ಲಿ ಭಾಷಣ ಮಾಡುವ ಸಂದರ್ಭಗಳಲ್ಲಿ
3. ವಿವಿಧ ವೇದಿಕೆಗಳಲ್ಲಿ ವ್ಯಕ್ತಿ ತನ್ನ ಸಂಸ್ಥೆಯನ್ನು ಪ್ರತಿನಿಧಿಸಲು ಮಾತನಾಡುವಾಗ
4. ರೇಡಿಯೋ / ಟೆಲಿವಿಷನ್‌ಗಳಲ್ಲಿ ತಜ್ಞರಾಗಿ/ಅತಿಥಿಗಳಾಗಿ ಭಾಗವಹಿಸಬೇಕಾದಾಗ
5. ಅತ್ಯಂತ ಕಡಿಮೆ ಅವಧಿಯಲ್ಲಿ ಕೇಳುಗ / ಗ್ರಾಹಕರನ್ನು ಪ್ರಭಾವಿಸಲು (ಮಾರ್ಕೆಟಿಂಗ್ ಸನ್ನಿವೇಶಗಳಲ್ಲಿ)
ಮೇಲಿನ ಸಂದರ್ಭಗಳಲ್ಲಿ ಉತ್ತಮ ‘ಧ್ವನಿಬಿಂಬ’ ಹೊಂದಿರುವವರೇ ಮೇಲುಗೈ ಸಾಧಿಸುತ್ತಾರೆ ಎನ್ನುವುದು ಅನುಭವಸಿದ್ಧವಾದ ಮಾತು. ಇಂಥವಕ್ಕೆಲ್ಲ, ಒಂದು ‘ಆದರ್ಶ ಧ್ವನಿಬಿಂಬ’ (ideal voice image) ಇದೆಯೇ ಎಂದರೆ ಇಲ್ಲ ಎಂದೇ ಉತ್ತರಿಸಬೇಕಾದೀತು. ಹಾಗಾದರೆ ಉತ್ತಮ ‘ಧ್ವನಿಬಿಂಬ’ವೆಂದರೆ ಯಾವುದು?
ಯಾವ ಧ್ವನಿಬಿಂಬ ನಮ್ಮ ವೈಯಕ್ತಿಕ ಅಗತ್ಯಗಳನ್ನು ಸಮರ್ಥವಾಗಿ ಪೂರೈಸುತ್ತದೆಯೋ ಅದುವೇ ನಮ್ಮ ಮಟ್ಟಿಗೆ ಉತ್ತಮ. ಅದು ನಮ್ಮ ನಂಬಿಕೆಗಳು, ಆದರ್ಶಗಳು, ಭಾವನೆಗಳು ಮತ್ತು ಚಿಂತನೆಗಳನ್ನು ಪ್ರತಿಬಿಂಬಿಸುತ್ತದೆ. ಯಶಸ್ವೀ ಧ್ವನಿಯೆನ್ನುವುದು ನಮ್ಮ ವ್ಯಕ್ತಿತ್ವದೊಂದಿಗೆ ಮತ್ತು ನಾವು ತಲುಪಿಸಬೇಕಾಗಿರುವ ಸಂದೇಶದೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿರುತ್ತದೆ. ನಾವೆಲ್ಲರೂ ನಮ್ಮ ಕಾರ್ಯಕ್ಷೇತ್ರದ ಕುರಿತಾಗಿ ಬೇಕಾದ ಜ್ಞಾನ ಮತ್ತು ಸಾಮರ್ಥ್ಯಗಳನ್ನು ಗಳಿಸಿಕೊಳ್ಳಲು ಇಡೀ ಜೀವಮಾನವನ್ನೇ ವ್ಯಯ ಮಾಡುತ್ತೇವೆ. ಅದರೊಂದಿಗೇ, ಇತರರಿಗೆ ನಮ್ಮ ಆಲೋಚನೆಗಳನ್ನು ಸ್ಪಷ್ಟವಾಗಿ ತಿಳಿಸಲು ಉತ್ತಮ ಧ್ವನಿಬಿಂಬವನ್ನು ಬಳಸಿಕೊಳ್ಳುವುದನ್ನೂ ಕಲಿಯಬೇಕು.
ಹಾಗಾದರೆ, ಉತ್ತಮ ಧ್ವನಿಯನ್ನು ಗುರುತಿಸುವುದು ಹೇಗೆ ಎನ್ನುವ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆಯಲ್ಲವೇ? ಇದಕ್ಕೆ ಉತ್ತರವನ್ನು ಧ್ವನಿತಜ್ಞರು ಇಂಗ್ಲಿಷಿನ ಎನ್ನುವ ಪದದ ಅಕ್ಷರಗಳ ಮೂಲಕವೇ ಸೃಜನಾತ್ಮಕವಾಗಿ ಸಂಕ್ಷೇಪಿಸಿ ಸೂಚಿಸಿದ್ದಾರೆ.
V – Vibrant – ಜೀವಂತಿಕೆ
O – Open – ಮುಕ್ತ
I – Intentional – ಉದ್ದೇಶಪೂರ್ವಕ
C – Conversational – ಸಂಭಾಷಣಾತ್ಮಕ
E – Emotionally Expressive – ಭಾವನಾತ್ಮಕ ಅಭಿವ್ಯಕ್ತಿ
ಮಾತನಾಡುವ ವ್ಯಕ್ತಿಯ ಧ್ವನಿಯಲ್ಲಿನ ‘ಜೀವಂತಿಕೆ’, ಆ ವ್ಯಕ್ತಿ ಆ ಕ್ಷಣದಲ್ಲಿ ಕೇಳುಗರೊಂದಿಗೆ ಜೀವಂತನಾಗಿ, ಸಕ್ರಿಯನಾಗಿ ಇದ್ದಾನೆ ಎನ್ನುವ ಅನುಭವ ನೀಡುತ್ತದೆ. ಇದರಿಂದಾಗಿ ಆಡಿದ ಮಾತು ಕೇಳುಗರ ಮೇಲೆ ಅತಿ ಹೆಚ್ಚು ಪರಿಣಾಮವನ್ನು ಬೀರಲು ಸಾಧ್ಯವಾಗುತ್ತದೆ.
ಧ್ವನಿಯಲ್ಲಿನ ‘ಮುಕ್ತ’ ಗುಣ ಎಂದರೆ, ಕೇಳುವವರಿಗೆ ಮಾತನಾಡುತ್ತಿರುವ ವ್ಯಕ್ತಿ ಗುಟ್ಟುಮಾಡುತ್ತಿಲ್ಲ ಎನ್ನುವ ಭಾವನೆ ಬರುವಂಥ ‘ಪಾರದರ್ಶಕ’ ಅನುಭವವಾಗುವಂತಹುದು. ಜೊತೆಗೆ, ಕೇಳುಗರೊಂದಿಗಿನ ‘ಪ್ರತಿಸ್ಪಂದನೆ’ಯೂ ಅವರಿಗೆ ‘ಮುಕ್ತ’ ಗುಣದ ಅನುಭವವನ್ನು ನೀಡುತ್ತದೆ. ಯಶಸ್ವಿಯಾಗಿ ಮಾತನಾಡಲು ಬಯಸುವವರೆಲ್ಲ ಮೊದಲಿಗೆ ಉತ್ತಮ ಕೇಳುಗರಾಗಬೇಕು ಎನ್ನುವುದು ಪ್ರಸಿದ್ಧವಾದ ಹೇಳಿಕೆ. ಕೇಳುಗರೊಂದಿಗಿನ ‘ಪ್ರತಿಸ್ಪಂದನೆ’ಯಿಂದಾಗಿ ಮಾತನಾಡುವ ವ್ಯಕ್ತಿಗೆ ಅವರೊಂದಿಗೆ ಸಂಬಂಧ ಏರ್ಪಡಿಸಿಕೊಳ್ಳಲು ಸಾಧ್ಯವಾಗಿ ಸಂವಹನ ಕ್ರಿಯೆ ಸಾರ್ಥಕವಾಗುತ್ತದೆ.  ನಮ್ಮ ‘ಉದ್ದೇಶ’ ಸ್ಪಷ್ಟವಾಗಿದ್ದರೆ, ಅದೇ ನಾವಾಡುವ ಮಾತಿಗೆ ಮತ್ತು ಅದರ ಅಭಿವ್ಯಕ್ತಿಗೆ ಮಾರ್ಗದರ್ಶಕವಾಗುತ್ತದೆ ಜೊತೆಗೆ, ಕೇಳುಗರು ನಮ್ಮ ಮಾತಿನ ಅರ್ಥವನ್ನು ಗ್ರಹಿಸುವುದೂ ಸುಲಭವಾಗುತ್ತದೆ.
ನಾವಾಡುವ ಪ್ರತಿ ಮಾತನ್ನೂ ಭಾಷಣದ ರೀತಿಗಿಂತಲೂ ಸಂಭಾಷಣೆಯ ರೂಪದಲ್ಲಿ ಪ್ರಸ್ತುತಪಡಿಸುವ ಪ್ರಯತ್ನ ಮಾಡಿದರೆ, ಸಂವಹನ ಕ್ರಿಯೆಯಲ್ಲಿ ನಮಗೆ ದೊರೆಯುವ ಯಶಸ್ಸು ದೊಡ್ಡ ಪ್ರಮಾಣದ್ದು. ನಮ್ಮ ಮಾತಿನಲ್ಲಿನ ‘ಭಾವನಾತ್ಮಕ ಅಭಿವ್ಯಕ್ತಿ’ಯ ಗುಣ ಬಹಳ ಮುಖ್ಯ. ಕಥೆ ಹೇಳುವ ಶೈಲಿ ಮಾತಿಗೆ ಮೆರುಗು ನೀಡುತ್ತದೆ. ನಮ್ಮೊಳಗಿನ ಸಕಾರಾತ್ಮಕ ಭಾವನೆಗಳನ್ನು ಮುಗುಳ್ನಗೆಯ ಮೂಲಕ ನಮ್ಮ ಕಣ್ಣು ಮತ್ತು ಧ್ವನಿಗಳಲ್ಲಿ ತುಂಬಿದರೆ, ಧ್ವನಿಗೆ ಆರ್ದ್ರತೆ, ಆಪ್ತತೆಗಳು ಒದಗಿಬರುತ್ತವೆ. ಇದರಿಂದ ಧ್ವನಿಯಲ್ಲಿ ಸಂತಸದ, ಹಂಚಿಕೊಳ್ಳುವ ಮತ್ತು ಪರಸ್ಪರ ನಂಬಿಕೆಯ ಭಾವಗಳು ಮೂಡಿಬರುತ್ತವೆ.
ಇದನ್ನು ರೂಢಿಸಿಕೊಳ್ಳಲು ನಾವು ಪುಟಾಣಿ ಮಕ್ಕಳೊಂದಿಗೆ , ನಮ್ಮ ಮುದ್ದಿನ ಪ್ರಾಣಿಯೊಂದಿಗೆ ಮಾತನಾಡುವ ಸಂದರ್ಭವನ್ನು ನೆನಪಿಸಿಕೊಂಡು ಪ್ರೇರಣೆಯನ್ನು ಪಡೆಯಬಹುದು. ಈ ಎಲ್ಲವುಗಳ ಹಿನ್ನೆಲೆಯಲ್ಲಿ, ಧ್ವನಿ ಎನ್ನುವುದು ಕೇವಲ ನಮ್ಮ ಗಂಟಲು ಹೊರಡಿಸುವ ಶಬ್ದವಲ್ಲ; ಬದಲು, ನಮ್ಮ ಸಂಪೂರ್ಣ ವ್ಯಕ್ತಿತ್ವದ ಶಬ್ದಬಿಂಬ ಎನ್ನುವುದನ್ನು ಮನದಟ್ಟು ಮಾಡಿಕೊಳ್ಳಬೇಕು. ‘ಬಾಯಿಬಿಟ್ಟರೆ ಬಣ್ಣಗೇಡು’ ಎನ್ನುವಂತಾಗದಿರಲು ನಾವೆಲ್ಲರೂ ನಮ್ಮ ವೈಯಕ್ತಿಕ ಧ್ವನಿಬಿಂಬದ ಕುರಿತು ಆಲೋಚಿಸಿ ರೂಪಿಸಿಕೊಳ್ಳಲು ಕಾರ್ಯಪ್ರವೃತ್ತರಾಗಬೇಕು. ಮಾತು ಮತ್ತು ಧ್ವನಿಗೆ ಸಂಬಂಧಿಸಿದ ವೃತ್ತಿಯಲ್ಲಿ ಇರುವವರಂತೂ ಈ ಬಗ್ಗೆ ಹೆಚ್ಚು ಶ್ರದ್ಧೆವಹಿಸುವುದು ಸೂಕ್ತ.

(ಕೃಪೆ ಪ್ರಜಾವಾಣಿ)

No comments: